ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ, ನಳಿನಿ ಮೂರ್ತಿ ಪ್ರಶಸ್ತಿ ಪ್ರದಾನ ಹಾಗೂ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮ.
ಕರ್ನಾಟಕ ಲೇಖಕಿಯರ ಸಂಘದ 24 – 25 ನೆಯ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 9 – 04 – 2026, ಗುರುವಾರದಂದು ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸಬಿಹಾ ಭೂಮಿಗೌಡ ಅವರು ಮಾತನಾಡಿದರು. ಸುಮಾರು 37 – 38 ವರ್ಷಗಳ ಕಲೇಸಂನ ಒಡನಾಟವನ್ನು ಸ್ಮರಿಸಿದರು. ಲೇಖಕಿಯರ ಸಂಘವು ಆರಂಭದಿಂದಲೂ ಕಮ್ಮಟಗಳ ಮೂಲಕ ಅದರಲ್ಲಿ ಭಾಗವಹಿಸಿದ ಲೇಖಕಿಯರಿಗೆ ಸಾಹಿತ್ಯವನ್ನು ಹೇಗೆ ಓದಬೇಕು, ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಕಲೇಸಂನ ಪ್ರಶಸ್ತಿ ಲೇಖಕಿಯರಿಗೆ ಅಸ್ಮಿತೆಯ ಸಂಕೇತವಾಗಿದೆ. ಹೊಸ ಜವಾಬ್ದಾರಿಯನ್ನು ಹೊತ್ತು ನಡೆಯುತ್ತಿರುವ ಪ್ರಸ್ತುತ ಕಲೇಸಂನ ಇಡೀ ತಂಡಕ್ಕೆ ಕನಸನ್ನು ನನಸಾಗಿಸುವ ಉತ್ಸಾಹ ಮತ್ತು ಶಕ್ತಿ ಇದೆ ಎಂದರು.
ಕಲೇಸಂ ವೆಬ್‌ಸೈಟ್ ನಲ್ಲಿ ಲಭಿಸುವ ಮಾಹಿತಿಯನ್ನು ಕುರಿತು ಜಯಲಕ್ಷ್ಮಿ ಪಾಟೀಲ್ ಅವರು ವಿವರಿಸಿದರು.
ಕಲೇಸಂನ ವೆಬ್ಸೈಟ್ ಅನ್ನು ಡಾ. ಎನ್. ಗಾಯತ್ರಿ ಅವರು ಉದ್ಘಾಟಿಸಿದರು. ಬದುಕು ಮತ್ತು ಬರಹ ಆಧುನಿಕವಾಗುತ್ತಿರುವ ಈ ಕಾಲದಲ್ಲಿ ವೆಬ್ಸೈಟ್ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಪ್ರಶಸ್ತಿಗಳನ್ನು ನಿರ್ಣಯಿಸುವ ಹಂತದಲ್ಲಿ ಹಲವು ಉತ್ತಮ ಪುಸ್ತಕಗಳನ್ನು ಓದುವಂತಾಯಿತು. ಇಂದು ಮಹಿಳೆಯರು ಪ್ರವೇಶಿಸದೇ ಇರುವ ಕ್ಷೇತ್ರವೇ ಇಲ್ಲ. ಮಹಿಳೆಯರ ಜ್ಞಾನ ಪ್ರಪಂಚದಾದ್ಯಂತ ಹರಡಿದೆ. ಮಹಿಳೆಯರ ಬರವಣಿಗೆಗಳು ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿದೆ. ಅದರಿಂದ ಪುರುಷಶಾಹಿ ಜಗತ್ತಿಗೆ ಸಿಟ್ಟು ಬರಬಹುದು ಆದರೆ ಅದನ್ನು ದಿಟ್ಟತನದಿಂದ ಎದುರಿಸಿ ನಿಲ್ಲಬೇಕು ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಸ್. ಜಿ. ಸಿದ್ದರಾಮಯ್ಯ ಅವರು ಇಂದು ಇಡೀ ಜಗತ್ತು ಕ್ರೌರ್ಯ, ಹಿಂಸೆ, ರಕ್ತಪಾತವನ್ನು ಅನುಭವಿಸುತ್ತಿದೆ. ಅವರೆಲ್ಲರೂ ನಮ್ಮ ಸಹಜೀವಿಗಳು. ಜೀವಸಂಕುಲದ ಮನುಜ ಲೋಕದ ಈ ಕ್ರೌರ್ಯ ನಮ್ಮಲ್ಲಿ ಸಂಕಟವನ್ನು ಉಂಟುಮಾಡುತ್ತದೆ. ಬಹುತೇಕ ಯುದ್ಧಗಳು ನಡೆಯುವುದು ಪುರುಷಾಹಂಕಾರದಿಂದ. ಹಿಂಸೆಯನ್ನು ಅಹಿಂಸೆಯಿಂದ ಮಾತ್ರ ಸೋಲಿಸಲು ಸಾಧ್ಯ. ಮಾತೃ ಹೃದಯದ ಶಕ್ತಿ ಎಲ್ಲಾ ಬರಹಗಾರರಿಗೂ ಬರಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿ. ಎನ್. ಮೋಹನ್ ಅವರು ಸಂಘದ ಜೊತೆಗೆ ತಮಗೆ ಇರುವ ಒಡನಾಟವನ್ನು ಹೇಳುತ್ತಾ, ಆರಂಭ ಘಟ್ಟದಿಂದಲೂ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಅವರು ವಹಿಸಿದ್ದರು. ಲೇಖಕಿಯರ ಸಂಘವು ಇದುವರೆಗೂ ನಡೆಸಿದ ಕಾರ್ಯಕ್ರಮಗಳನ್ನು ಮತ್ತು ಮುಂದೆ ಹಮ್ಮಿಕೊಳ್ಳುತ್ತಿರುವ ಕಾರ್ಯ ಯೋಜನೆಗಳನ್ನು ಸಭೆಯ ಮುಂದಿಟ್ಟರು. ಉಪಾಧ್ಯಕ್ಷರಾದ ಡಾ// ಆರ್.ಕೆ. ಸರೋಜಾ ಮತ್ತು ಸರ್ವಮಂಗಳಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಮಾ ಸತೀಶ್ ಅವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.
1.ಶ್ರೀಮತಿ ಕೆ.ಟಿ. ಬನಶಂಕರಮ್ಮ ದತ್ತಿ ಪ್ರಶಸ್ತಿ – (ಶಿಕ್ಷಕಿ ಹಾಗೂ ಲೇಖಕಿ) – ನಿರ್ಮಲಾ ಶೆಟ್ಟರ್
2. ಶ್ರೀಮತಿ ಶ್ರೀಲೇಖಾ ದತ್ತಿ ಪ್ರಶಸ್ತಿ(ಕವಿತೆ) – ಪ್ರತಿಭಾ ಪಾಟೀಲ- ಸಿಂಬಿ
3. ಶ್ರೀಮತಿ ಭಾಗ್ಯ ನಂಜಪ್ಪ ದತ್ತಿ ಪ್ರಶಸ್ತಿ(ವಿಜ್ಞಾನ ಸಾಹಿತ್ಯ) – ಡಾ// ಕೆ.ಎಸ್. ಚೈತ್ರ – ದಂತ ಕಥೆಗಳು
4. ಶ್ರೀಮತಿ ಜಿ.ವಿ. ನಿರ್ಮಲ ದತ್ತಿ ಪ್ರಶಸ್ತಿ(ಅನುವಾದ) – ವಿಜಯಾ ಶಂಕರ್- ಮನೋಜ್ಞ (ತೆಲುಗುಮೂಲ: ಸಲೀಂ)
5. ಶ್ರೀಮತಿ ಉಷಾ. ಪಿ. ರೈ ದತ್ತಿ ಪ್ರಶಸ್ತಿ(ಆತ್ಮಕಥನ) – ಎಚ್.ಆರ್. ಲೀಲಾವತಿ- ಹಾಡಾಗಿ ಹರಿದಾಳೆ
6. ಶ್ರೀಮತಿ ನಾಗರತ್ನ ಚಂದ್ರಶೇಖರ್ ದತ್ತಿ ಪ್ರಶಸ್ತಿ(ಲಲಿತ ಪ್ರಬಂಧ) – ಸವಿತಾ ಮಾಧವ ಶಾಸ್ತ್ರಿ, ಗುಂಡ್ಮಿ – ನೀರ್ ದೋಸೆ
7.ಡಾ. ಬಿ. ಸಿ. ಶೈಲಾ ನಾಗರಾಜ್ ಪ್ರಶಸ್ತಿ(ಕಾವ್ಯ) – ಡಾ. ಭಾರತಿ ದೇವಿ ಪಿ.- ಚಲಿಸುತ್ತಿವೆ ಚುಕ್ಕಿಗಳು
8. ಶ್ರೀಮತಿ ಸಂಕಮ್ಮ ಜಿ. ಎಸ್. ಬ್ಯಾಡಗಿ ಪ್ರಶಸ್ತಿ(ಕಾವ್ಯ) – ಡಾ. ಗೀತಾ ವಸಂತ- ಪ್ರಾಣಪಕ್ಷಿಯ ರೆಕ್ಕೆ
9. ಶ್ರೀ ಜಯ ಕಲಕೋಟಿ ದತ್ತಿ ಪ್ರಶಸ್ತಿ(ವಚನ ಸಾಹಿತ್ಯ) – ಡಾ. ಮೀನಾಕ್ಷಿ ಬಾಳಿ- ವಚನ ನಿಜದರ್ಶನ
10. ಶ್ರೀಮತಿ ಸುಶೀಲಾ ಸೋಮಶೇಖರ್ ದತ್ತಿ ಪ್ರಶಸ್ತಿ(ವಚನ ಸಾಹಿತ್ಯ) – ಸುಶೀಲಾ ಸದಾಶಿವಯ್ಯ- ಜಗದ ಬೆರಗು
11. ಶ್ರೀಮತಿ ಲಕ್ಷ್ಮಿದೇವಮ್ಮ ದತ್ತಿ ಪ್ರಶಸ್ತಿ(ಕಥೆ) – ವಿದ್ಯಾ ಭರತನಹಳ್ಳಿ- ಬೇಸೂರ್
12. ಶ್ರೀಮತಿ ನಿರುಪಮಾ ದತ್ತಿ ಪ್ರಶಸ್ತಿ (ಕಥೆಗಳು) – ಡಿಜಿಟಲ್ ಮಾಧ್ಯಮ – ಎಲ್. ಗಿರಿಜಾರಾಜ್- ಪಾರೋತಿಯ ಶಿವ
ರಾಜಶ್ರೀ ಟಿ. ರೈ – ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ
13. ಶ್ರೀಮತಿ ಪ್ರೇಮಾ ಭಟ್ ಮತ್ತು ಎ. ಎಸ್. ಭಟ್ ದತ್ತಿ ಪ್ರಶಸ್ತಿ (ಲೇಖಕಿ/ಪ್ರಕಾಶಕಿ) – ಸುಧಾ ಚಿದಾನಂದಗೌಡ
14. ಶ್ರೀಮತಿ ತ್ರಿವೇಣಿ ದತ್ತಿ ಪ್ರಶಸ್ತಿ(ಕಥಾ ಸಂಕಲನ)
ಪ್ರಥಮ ಬಹುಮಾನ – ಡಾ. ಸುಜಾತಾ ಚಲವಾದಿ – ಲಚಮವ್ವ ಮತ್ತು ಇತರ ಕಥೆಗಳು
ದ್ವಿತೀಯ ಬಹುಮಾನ – ರೇಣುಕಾ ಕೋಡಗುಂಟಿ- ಚಿಗುರೊಡೆದ ಬೇರು
ತೃತೀಯ ಬಹುಮಾನ – ಸ್ಮಿತಾ ಅಮೃತರಾಜ್ ಸಂಪಾಜೆ- ಹಾಯ್ ಮೆಟಾಯ್
15. ಶ್ರೀಮತಿ ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ(ಕಾದಂಬರಿ) – ಬಿ. ಆರ್. ನಾಗರತ್ನ- ಕಾಲಗರ್ಭ
16. ಶ್ರೀಮತಿ ಕಮಲಾ ರಾಮಸ್ವಾಮಿ ದತ್ತಿ ಪ್ರಶಸ್ತಿ(ಪ್ರವಾಸ ಸಾಹಿತ್ಯ) – ಡಾ. ಕೆ.ವಿ. ರಾಜೇಶ್ವರಿ – ಕಿವಿ- ಕಾಂಗರೂಗಳ ನಡುವೆ
17. ಶ್ರೀಮತಿ ನುಗ್ಗೆಹಳ್ಳಿ ಪಂಕಜ ದತ್ತಿ ಪ್ರಶಸ್ತಿ(ಹಾಸ್ಯ ಕೃತಿ) – ಶೃತಿ ಗದ್ದೆಗಲ್ – ಹಳದಿ ಕ್ಯಾಪ್ ಸುಂದರಿ
18. ಶ್ರೀಮತಿ ಗುಣಸಾಗರಿ ನಾಗರಾಜ್ ದತ್ತಿ ಪ್ರಶಸ್ತಿ(ಮಕ್ಕಳ ಸಾಹಿತ್ಯ) – ಡಾ. ಲಲಿತಾ ಕೆ. ಹೊಸಪ್ಯಾಟಿ – ನದಿ ನದಿ ಎಲ್ಲಿ ಹೋತು
19. ಶ್ರೀಮತಿ ಇಂದಿರಾ ವಾಣಿರಾವ್ ದತ್ತಿ ಪ್ರಶಸ್ತಿ(ನಾಟಕ) – ಅಕ್ಷತಾ ರಾಜ್ ಪೆರ್ಲ – ನೆಲ ಉರುಳು
20. ತ್ರಿವೇಣಿ ಸಾಹಿತ್ಯ ಪುರಸ್ಕಾರ(ಸುಧಾ ಮೂರ್ತಿ ಪ್ರಾಯೋಜಿತ) – ಎ.ಜಿ. ರತ್ನ ಕಾಳೇಗೌಡ- ಪಂಚಾಯತಿ ಅಧ್ಯಕ್ಷೆ ಪುಟ್ಟಕ್ಕ
21. ಶ್ರೀಮತಿ ಜಯಮ್ಮ ಕರಿಯಣ್ಣ ದತ್ತಿ ಪ್ರಶಸ್ತಿ (ಸಂಶೋಧನೆ) – ಡಾ. ವಿದುಷಿ ಶ್ಯಾಮಲಾ ಪ್ರಕಾಶ್ – ಮಾತಿನೊಳಗಣ ಧಾತು